ಬೆಂಗಳೂರಿನ ಕಸ ತೊಂದರೆ ಮತ್ತು ಸರಳತೆ

ದೊಡ್ಡ ಪಟ್ಟಣ, ದೊಡ್ಡ ಕಸ! (ತಿಟ್ಟ: news.bbcimg.co.uk)
ತೊಂದರೆಗಳ ಬಗ್ಗೆ ಮಾತಾಡುವಾಗ ಬೆಂಗಳೂರು ಪಟ್ಟಣವನ್ನು ಹೇಗೆ ಮರೆಯಲಾದೀತು? ಹಾಗೇ ಇಲ್ಲಿ ತೊಂದರೆಗಳನ್ನು ಬಗೆಹರಿಸಲು ಮಾಡಲಾಗುತ್ತಿರುವ ಸಾಹಸಗಳನ್ನೂ ಮರೆಯಲಾಗೊಲ್ಲ!

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಕಸ ವಿಲೇವಾರಿಯೆಂಬ ಒಂದು ಹೆಮ್ಮಾರಿ ಪ್ರತಿದಿನ ಓದಲು, ಕಾಣಲು ದೊರಕಿತ್ತು, ಇವತ್ತಿಗೂ ಆ ತೊಂದರೆ ಬಗೆಹರಿಯದೇ ಉಳಿದಿದೆ.

ಕೈಗೇ ಸಿಗದಂತ ಜೋರಿನಿಂದ ಬೆಳೆಯುತ್ತಿರುವ ಬೆಂಗಳೂರು ಪಟ್ಟಣದಲ್ಲಿ ದಿನನಿತ್ಯ ಹೊರಬೀಳುವ ಕಸದ ಅಳತೆ ಸಾವಿರಾರು ಟನ್ ಗಳೇ ಇದೆ. ನ್ಯಾಯವಾಗಿ ಈ ಕಸವನ್ನು ಬಿಸಾಡಲೂ ಆಗೊಲ್ಲ, ಇಟ್ಟುಕೊಳ್ಳಲೂ ಆಗೊಲ್ಲ, ಆದರೆ ಬೆಂಗಳೂರಿನ ಮುನ್ಸಿಪಾಲಿಟಿಯೋರು ತೀರ್ಮಾನಿಸಿರುವುದು ಈ ಕಸವನ್ನೆಲ್ಲಾ ಸುತ್ತಲಿನ ಅಮಾಯಕ ಹಳ್ಳಿಗಳಿಗೆ ಸಾಗು ಹಾಕುವುದು, ಅಲ್ಲಿಯ ಸುತ್ತಲಿನ ಜಮೀನುಗಳಲ್ಲಿ ಈ ವಿಶದಂತ ಕಸವನ್ನು ಹೂತಿಡುವುದು, ಬದಲಿಗೆ ಆ ಹಳ್ಳಿಯವರಿಗೆ ಒಂದಿಶ್ಟು ದುಡ್ಡು ಕೊಡುವುದು. ಈ ರೀತಿ ಮಾಡುವುದರಿಂದ ಬೆಂಗಳೂರಿನಲ್ಲಿ ಕಾಣಲು ಕಸವೇನೋ ಉಳಿಯಲ್ಲ, ಆದರೆ ಸುತ್ತಲಿನ ಜಮೀನುಗಳಲ್ಲಿ ವಿಶ ಮಾತ್ರ ಸೇರುತ್ತಲೇ ಬರುತ್ತಿದೆ. ಈ ಜಮೀನುಗಳಲ್ಲಿ ಬೆಳೆವ ಸರಕುಗಳಲ್ಲಿ ಏನು ಸೇರುತ್ತಿದೆಯೋ ಊಹೆ ಮಾಡುವುದು ಕಶ್ಟವೇನಲ್ಲ. ಮೇಲಾಗಿ, ಹೆಚ್ಚಾಗಿ ನೆಲನೀರನ್ನೇ ಬಳಸುವ ಬೆಂಗಳೂರಂತಹ ಪಟ್ಟಣದ ಸುತ್ತಲೂ ನೆಲದ ಕೆಳಗೆ ಇಂತಹ ವಿಶವನ್ನು ಪಟ್ಟಣದ ಜನರೇ ತೀರ್ಮಾನಿಸಿ ಹೂತಿಡುತ್ತಿರುವುದು ಯಾರಿಗೆ ನ್ಯಾಯ, ಯಾರಿಗೆ ಅನ್ಯಾಯ ಮಾಡಿದಂತಾಯಿತು ಎಂಬ ಪ್ರಶ್ನೆ ಎದ್ದೇಳುವುದಿಲ್ಲವೇ?

ಈಗ ಇಂದು ತೊಂದರೆಯಂತೆ ಗೋಚರವಾಗದಿದ್ದರೂ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಿಶತುಂಬಿದ ಕಸಗಳು ನಮ್ಮ ನೆಲಗಳಲ್ಲಿ ಹೂತಿಡುತ್ತಾ ಸಾಗಿದಲ್ಲಿ ಮುಂದೆ ಇದೇ ಪ್ಲಾಸ್ಟಿಕ್ ವಿಶ ನಮ್ಮ ರಕ್ತಗಳಲ್ಲಿ ಸೇರಲು ಶುರುವಾದಾಗ ತೊಂದರೆಗಳ ಮಹಾಪೂರವೇ ಎದ್ದೇಳುವುದು ಕಚಿತ. ಬೆಳವಣಿಗೆಯೆಂಬ ಬೂತದ ಬೆನ್ನೇರಿರುವ ಇಂದಿನ ಪೀಳಿಗೆ ವಿಶದೊಡನೆ ಸರಸವಾಡುತ್ತಿರುವುದನ್ನು ಗಮನಿಸದೇ ಸಾಗುತ್ತಿದೆ, ಆದರೆ ಈ ಬೂತ ತನ್ನ ಮಿಕ್ಕ ಅವತಾರಗಳನ್ನು ತಳೆದಾಗ ಕಾಲ ಮಿಂಚಿ ಹೋಗಿರುತ್ತಾ ಎಂಬ ಪ್ರಶ್ನೆ ನಾವು ನಮ್ಮನ್ನೇ ಕೇಳಿಕೊಳ್ಳಬೇಕಲ್ವೇ?

ಹಾಗಾದರೆ ಏನು ಮಾಡಬಹುದು? ಬೆಂಗಳೂರಿನಂತಹ ಪಟ್ಟಣದ ಜೀವನದಲ್ಲಿ ಈ ಕಸ ಬೆರೆತು ಹೋಗಿದೆಯೇ? ಕಸ ಉತ್ಪನ್ನವಾದ ಬಳಿಕದ ಚಿಂತನೆಯೊಂದೇ ಮಾಡಿದರೆ ಸಾಕೇ, ಕಸ ಉತ್ಪನ್ನವಾಗದ ಹಾಗೆ ಮಾಡಲು ಏನು ಮಾಡಬಹುದು ಎಂದು ಯೋಚಿಸಲು ಆಗುವುದೇ? ಹಾಗೆ ಮಾಡಲು ಬದುಕಿನಲ್ಲಿ ಎಂತಹ ಬದಲಾವಣೆ ಅಗತ್ಯ? ಬದುಕಿನಲ್ಲಿ ಸರಳತೆ ಇದ್ದರೆ ಇದನ್ನು ಸಾದಿಸಬಹುದಾ? ಈ ಹೆಮ್ಮಾರಿಗೆ ಒಂದು ಸರಳ ಮದ್ದು ಇದೆಯೇ?

0 comments

ನಿಮ್ಮ ಅನಿಸಿಕೆ ತಿಳಿಸಿರಿ: