ಜಾತಿಗಳ ಸರಳ ತಿರುಳು ಮತ್ತು ಶಾಂತಿ

(ತಿಟ್ಟ: kannadaquran.com)
ಮತ್ತೊಮ್ಮೆ ಹಿಂದುಗಳು ಮುಸ್ಲಿಮ್ ಸೋದರರ ಅನಿಸಿಕೆಗಳಿಗೆ ದಕ್ಕೆ ಉಂಟು ಮಾಡಿದ್ದಾರೆ ಎಂಬ ಕೂಗು ಕೇಳಿಬಂದಿದೆ. ಮೂಲವಾಗಿ ತಮಿಳಿನಲ್ಲಿ ತೆಗೆದಿರುವ ವಿಸ್ವರೂಪಮ್ ಎಂಬ ಓಡುತಿಟ್ಟವೊಂದು ಮುಸ್ಲಿಮರ ಮನಸ್ಸಿಗೆ ನೋವುಂಟು ಮಾಡುವಂತದ್ದು ಎಂದು ಹೇಳಿ ತಮಿಳುನಾಡಿನೊಳಗೆ ಅದರ ಪರದೆಯ ಮೇಲ್ಕಾಣುವಿಕೆಯನ್ನು ತಡೆಹಿಡಿಯಲಾಗಿದೆಯೆಂದು ವರದಿಗಳು ಬರುತ್ತಿವೆ. ಇದು ಮುಸ್ಲಿಮರಿಗಶ್ಟೇ ಅಲ್ಲ, ಬೇರೆಲ್ಲಾ ಜಾತಿಗಳ ಜನರಿರುವ ಈ ನಮ್ಮ ಸಮಾಜದ ಪ್ರತಿಯೊಬ್ಬ ಮಂದಿಗೂ ನೋವಿನ ವಿಶಯವಾಗಲಿದೆ.

ಆದರೆ ನಿಜಕ್ಕೂ ಈ ಎರಡು ದೊಡ್ಡ (ಬಾರತದಲ್ಲಿ ಅದನ್ನು ಪಾಲಿಸುವವರ ಅಂಕಿಯ ಅನುಸಾರ) ಜಾತಿಗಳ ಅನುಯಾಯಿಗಳ ನಡುವೆ ತಿಕ್ಕಾಟ ಇದೆಯೇ? ಇರಬೇಕೇ? ಅತವಾ ಇಲ್ಲದ ತಿಕ್ಕಾಟವನ್ನು ಯಾವುದೋ ಕಾರಣಕ್ಕೆ, ಯಾರೋ ಕಿಡಿಗೇಡಿಗಳು ಹುಟ್ಟಿಸಿ ಅದರ ದುರುಪಯೋಗ ಮಾಡಿಕೊಳ್ಳುತ್ತಿರಬಹುದೇ ಎಂಬ ಪ್ರಶ್ನೆ ಏಳುವುದು ಸಹಜವೇ. ಆದರೆ ಈ ಜಾತಿಗಳ ನಡುವೆ ತಿಕ್ಕಾಟ ಅತವಾ ಕಂಡರಾಗದಂತದ್ದು ಏನೂ ಇಲ್ಲವಾದರೆ ಇಂತಹ ತುಚ್ಚ ಕಾರಣಗಳಿಂದೆಲ್ಲಾ ಪದೇ-ಪದೆ ಶಾಂತಿಯ ಕೆರೆ ಏಕೆ ಕದಲಿ ಕೂರುತ್ತದ್ದೇವೆ? ಸಾವಿರಾರು ಸಾಲುಗಳಿಂದ ಬೆಳೆದುಬಂದಿರುವ ಸೋದರಿಕೆಯನ್ನು ಜಾತಿಯ ಈ ಅಂತರ ಮುರಿಯದಹಾಗೆ ಈ ಎರಡೂ ಜಾತಿಗಳ ನಂಬಿಕೆಗಳು ಏನು ಎಂದು ಒಂದೇ ವೇದಿಕೆಯ ಮೇಲೆ ಯಾಕೆ ಜನರು ಹಂಚಿಕೊಳ್ಳುತ್ತಿಲ್ಲ? ಅತವಾ ಅಂತಹ ಕೆಲಸ ಮಾಡಲು ಸಾದ್ಯವೇ ಆಗುತ್ತಿಲ್ಲವೇ? ಇದರ ಕಾರಣವಾದರೂ ಏನಿರಬಹುದು?

ಮುಸ್ಲಿಮರ ಪೂಜಿತ ಹೊತ್ತಗೆ ಕುರಾನ್ ಇನ ಕನ್ನಡ ರೂಪ ಎಂದು ಈ ಮಿಂದಾಣ ಹೇಳುತ್ತದೆ. ಇದರಲ್ಲಿ ಕುರಾನಿನ ವಚನಗಳನ್ನು ಪೂರ್ತಿ ಸಂಸ್ಕ್ರುತೀಕರಿಸಿ ಹೀಗೆ ಅರ್ತವೇ ಆಗದ ಹಾಗೆ ರೂಪಿಸಿ ಯಾರು ಇಟ್ಟಿದ್ದಾರೋ ತಿಳಿಯದು. ಸರಳವಾಗಿ ಅರ್ತವಾಗುವಂತ ಕನ್ನಡದಲ್ಲಿ ಕುರಾನ್ ಅನ್ನು ಎಲ್ಲಿ ಕಾಣಬೇಕೋ ತಿಳಿಯದೇ ಇರುವಂತ ಸ್ತಿತಿ ಇವತ್ತು ನಮ್ಮ ಸಮಾಜದಲ್ಲಿದೆ. ಒಟ್ಟಿನಲ್ಲಿ ಮುಸ್ಲಿಮರಲ್ಲಿ ಕನ್ನಡಿಗರು ಯಾರೂ ಕನ್ನಡವೆಂದರೆ ಸಂಸ್ಕ್ರುತವೇ ಎಂಬ ಗೊಂದಲದಿಂದ ಹೊರಗೇ ಬಾರದಂತೆ ಮಾಡಲು ಮತ್ತು ಕನ್ನಡದ ಕಾರಣದಿಂದ ಮಿಕ್ಕೆಲ್ಲರೊಡನೆ ಒಗ್ಗಟ್ಟಿನಿಂದ ಇರದೇ ಇರುವ ಹಾಗೆ ಮಾಡಲು ಈ ಬಗೆಯ ಅನುವಾದಗಳೂ ಉರಿಗೆ ತುಪ್ಪ ಸುರಿಯುತ್ತಿವೆಯೇನೋ?

ಸರಿಯಾದ ಕನ್ನಡದ ಪದಗಳನ್ನೇ ಬಳಸಿ ಅನುವಾದ ಮಾಡಿದ್ದರೆ ಕುರಾನ್ ಇನ ನಿಜವಾದ ಹಿತ-ವಚನಗಳನ್ನು ಬೇರೆ ಜಾತಿಯವರೂ ಅರಿತುಕೊಳ್ಳಬಹುದಿತ್ತು. ಇದೇ ಮಾತು ಹಿಂದು ಜಾತಿಯ ಪೂಜಿತ ಹೊತ್ತಗೆಯನ್ನೇನು ಹೊರತುಪಡಿಸೊಲ್ಲ. ಹಿಂದು ಜಾತಿಯ ಪೂಜಿತ ಹೊತ್ತಗೆ ಕ್ರುಶ್ಣ ನುಡಿದ ಬಗವದ್ಗೀತೆ ಎಂದು ಮನ್ನಣೆಗೆಯ್ದಿದೆ. ಇದರದ್ದೂ ಅದೇ ಕತೆ. ಇದರದ್ದೂ ಕೂಡ ಸರಳವಾಗಿ ಅರ್ತ ಮಾಡಿಕೊಳ್ಳಬಹುದಾದ ಕನ್ನಡಾನುವಾದ ಎಲ್ಲೂ ದೊರಕದಂತಾಗಿದೆ. ಅನುವಾದವೆಂದೇ ಇದ್ದರೂ ಅದು ಪೂರ್ತಿಯಾದ ಸಂಸ್ಕ್ರುತದಿಂದ ಕನ್ನಡದಂತೇ ಕಾಣುವ ಸಂಸ್ಕ್ರುತಕ್ಕೆ ಆಗಿದೆಯಶ್ಟೆ. ಇದರಿಂದ ಯಾರಿಗೂ ಏನೂ ತಿಳಿಯದ ಹಾಗಾಗಿದೆ.

ಕರ್ನಾಟಕದೊಳಗಿನ ಜನ ಕನ್ನಡವನ್ನೇ ಆಡುವವರಾಗಿದ್ದು ಈ ಎರಡೂ ಜಾತಿಗಳು ಹೊರಗಿನಿಂದ ಬಂದು ತಮ್ಮ ತಮ್ಮ ನುಡಿಗಳಲ್ಲಿದ್ದ ಅವರ ಹಿತವಚನಗಳನ್ನು ನಮಗೆಲ್ಲಾ ಕೊಟ್ಟಿವೆಯಶ್ಟೇ ಆದರೂ, ಆ ವಚನಗಳ ಸಾರವನ್ನು ನಾವೆಂದೂ ನಮ್ಮ ನುಡಿಯಾದ ಕನ್ನಡಕ್ಕೆ ಸರಿಯಾಗಿ, ಸರಳವಾದ ರೀತಿಯಲ್ಲಿ ಅನುವಾದ ಮಾಡದೇ ಹೋಗಿರುವುದು ನಾವು ನಮ್ಮ ಜವಾಬ್ದಾರಿಯಿಂದ ದೂರ ಹೋಗಿರುವುದನ್ನು ತೋರಿಸುತ್ತದೆ. ಅಶ್ಟೇ ಅಲ್ಲ, ಇದೇ ನಮ್ಮ ಈ ಕುರುಡು ತಿಕ್ಕಾಟಗಳಿಗೆ ಕಾರಣವಾಗಿದೆಯೆಂಬುದರಲ್ಲಿ ಈಗ ಸಂಶಯವೇ ಉಳಿಯುವುದಿಲ್ಲ.

ಬಗೆ-ಬಗೆಯ ಜಾತಿಗಳ ಏರ್ಪಾಡಿನ ನಡುವೆ ಬದುಕಬೇಕಾದ ಕರ್ಮ ನಮ್ಮೆಲ್ಲರದ್ದಾಗಿದೆ. ಇದನ್ನು ತಿಳಿದಿಯೂ ನಮ್ಮ ಜಾತಿಯ ತಿರುಳನ್ನು ಸರಿಯಾಗಿ ಅರ್ತ ಮಾಡಿಕೊಳ್ಳುವ ಕೆಲಸ ನಾವು ಮಾಡದೇ ಹೋಗುವುದು ಬೇಡ. ಅದರ ನಿಜ ತಿರುಳು ತಿಳಿಯುವುದು ನಮ್ಮೆಲ್ಲರ ಒಳಿತಿಗೆ ಅವಶ್ಯವೆಂಬ ಸರಳ ನಿಜವನ್ನು ಅರಿಯೋಣ.

0 comments

ನಿಮ್ಮ ಅನಿಸಿಕೆ ತಿಳಿಸಿರಿ: